2023-24ನೇ ಸಾಲಿನ ಶಿಕ್ಷಕರ ಪ್ರಶಿಕ್ಷಣ ಶಿಬಿರ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಧಾರವಾಡದಲ್ಲಿ
Dharwad, May 16: A three-day Teacher Orientation Program for the teachers of Rashtrotthana Schools – North Region was organised herein Rashtrotthana Vidya Kendra. The program was started on May 14th and concluded this day.
ಧಾರವಾಡ, ಮೇ 16: ಇಲ್ಲಿನ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದಲ್ಲಿ ರಾಷ್ಟ್ರೋತ್ಥಾನ ಶಾಲೆಗಳ ಉತ್ತರ ಪ್ರಾಂತ್ಯದ 3 ದಿನಗಳ ಶಿಕ್ಷಕರ ಶಿಕ್ಷಕರ ಪ್ರಶಿಕ್ಷಣ ಶಿಬಿರವನ್ನು ಆಯೋಜಿಸಲಾಗಿತ್ತು. ಮೇ 14 ರಂದು ಪ್ರಾರಂಭವಾದ ಶಿಬಿರ ಈ ದಿನ ಮುಕ್ತಾಯವಾಯಿತು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದ ರಾಷ್ಟ್ರೋತ್ಥಾನ ಪರಿಷತ್‍ನ ಉಪಾಧ್ಯಕ್ಷರಾದ ಶ್ರೀ ದ್ವಾರಕನಾಥ ಅವರು ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣದ ಧ್ಯೇಯೋದ್ದೇಶಗಳನ್ನು ಕುರಿತು ಮಾತನಾಡುತ್ತಾ, “ರಾಷ್ಟ್ರೋತ್ಥಾನ ಪರಿಷತ್‍ನಡಿಯಲ್ಲಿ ಕಾರ್ಯನಿರ್ವಹಿಸುವ ವ್ಯಕ್ತಿಗಳು ರಾಷ್ಟ್ರೀಯ ಚಿಂತಕರಾಗಿರಬೇಕು. ಮಕ್ಕಳ ಮೂಲಕ ವ್ಯಕ್ತಿ ನಿರ್ಮಾಣ, ವ್ಯಕ್ತಿ ನಿರ್ಮಾಣದಿಂದ ರಾಷ್ಟ್ರ ನಿರ್ಮಾಣ ಮಾಡುವುದು ಸಂಸ್ಥೆಯ ಉದ್ದೇಶವಾಗಿದೆ” ಎಂದು ತಿಳಿಸಿದರು.
ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿದ್ದ ದಾವಣಗೆರೆ ಶಾಲೆಯ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಮನುಷ್ಯನ ಜೀವನಕ್ಕೆ ಅಗತ್ಯವಾದ ಜ್ಞಾನ ಮತ್ತು ಕರ್ಮದ ವಿವರಣೆ ನೀಡಿ, ಜ್ಞಾನದ ವಿಕಾಸಕ್ಕಾಗಿ ಇಂತಹ ತರಬೇತಿ ಶಿಬಿರಗಳ ಅಗತ್ಯತೆ ಹಾಗೂ ಶಿಕ್ಷಕರ ಜವಾಬ್ದಾರಿಗಳನ್ನು ಕುರಿತು ವಿವರಿಸಿದರು.
ಎರಡನೇ ಅವಧಿಯಲ್ಲಿ ಶ್ರೀ ನರಸಿಂಹ ಆಯಚಿತ್ ಇವರು competency process ಈ ವಿಷಯದ ಕುರಿತು ಮಾತನಾಡುತ್ತಾ “ಕಲಿಕೆಯಲ್ಲಿ ಮಕ್ಕಳನ್ನು ತೊಡಗಿಸಲು ಶಿಕ್ಷಕರು ಹಲವಾರು ಚಟುವಟಿಕೆಗಳನ್ನು ಮಾಡಬೇಕು. ಮಕ್ಕಳು ಕಲಿತ ವಿಷಯವನ್ನು ಜೀವನದಲ್ಲಿ ಅಳವಡಿಸುತ್ತಾ ಒಟ್ಟಿಗೆ ಬಾಳಬೇಕು” ಎಂದು ಹೇಳಿದರು.
ಮೂರನೇ ಅವಧಿಯಲ್ಲಿ ಶೈಕ್ಷಣಿಕ ವರ್ಷದ ಸಾಮಾನ್ಯ ಪಠ್ಯಕ್ರಮದ ಚೌಕಟ್ಟು ಮತ್ತು ಮೌಲ್ಯಮಾಪನ ಎಂಬ ವಿಷಯದ ಕುರಿತು ಹಗರಿಬೊಮ್ಮನಹಳ್ಳಿ ಶಾಲೆಯ ಪ್ರಾಂಶುಪಾಲರಾದ ಶ್ರೀ ರಂಗನಾಥ ಹಾಗೂ ದಾವಣಗೆರೆ ಶಾಲೆಯ ಶೈಕ್ಷಣಿಕ ಸಂಯೋಜಕರಾದ ಶ್ರೀ ಶಿವರಾಜ್ ಅವರು ವಿವರಿಸಿದರು.
ನಾಲ್ಕನೇ ಅವಧಿಯಲ್ಲಿ ಇತಿಹಾಸ ಉಪನ್ಯಾಸಕರಾದ ಶ್ರೀ ಲಕ್ಷ್ಮೀಶ ಹೆಗಡೆ ಸೋಂದಾ ಇವರು ಇತಿಹಾಸ ಬೋಧನೆಯಲ್ಲಿ ಪ್ರಾದೇಶಿಕ ಇತಿಹಾಸದ ಮಹತ್ವದ ಕುರಿತು ಮಾತನಾಡಿದರು.
ಎರಡನೇ ದಿನದ ಮೊದಲ ಅವಧಿಯಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಗುರಿ ಮತ್ತು ಉದ್ದೇಶಗಳನ್ನು ಕುರಿತು ಹಗರಿಬೊಮ್ಮನಹಳ್ಳಿ ಶಾಲೆಯ ಪ್ರಾಂಶುಪಾಲರಾದ ಶ್ರೀ ರಂಗನಾಥ ಹಾಗೂ ದಾವಣಗೆರೆ ಶಾಲೆಯ ಪ್ರಾಂಶುಪಾಲರಾದ ಶ್ರೀ ಮಂಜುನಾಥ ಇವರು ಮಾತನಾಡಿದರು.
ಎರಡನೆಯ ಅವಧಿಯಲ್ಲಿ ಚಿಂತಕರಾದ ಶ್ರೀ ವಿಶ್ವನಾಥ ಹಂಪಿಹೊಳಿ ಇವರು ಸ್ವಾಮಿ ದಯಾನಂದ ಸರಸ್ವತಿ ಹಾಗೂ ರಾಮತೀರ್ಥರ ಜೀವನದರ್ಶನ ಎಂಬ ವಿಷಯದ ಕುರಿತು ಬೌದ್ಧಿಕವನ್ನು ನೀಡಿದರು.
ಮೂರನೇ ಅವಧಿಯಲ್ಲಿ ವಿಕಾಸ ಭಾರತಿ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ರೇವತಿಯವರು ಭಾರತದರ್ಶನ ವಿಚಾರದಡಿಯಲ್ಲಿ ಅಖಂಡ ಭಾರತವನ್ನು ಪರಿಚಯಿಸಿದರು.
ನಾಲ್ಕನೇ ಅವಧಿಯಲ್ಲಿ ಶ್ರೀ ರವಿಕುಮಾರ್ ಅವರು ಶಿಕ್ಷಣದಲ್ಲಿ ಭಾರತೀಯತೆ ಎಂಬ ವಿಷಯದ ಕುರಿತು ಚರ್ಚಿಸಿದರು.
ಐದನೇ ಅವಧಿಯಲ್ಲಿ ಶ್ರೀ ಮಹೇಶ್ವರಯ್ಯ ಅವರು ಶಿಕ್ಷಣ ಅಂದು, ಇಂದು, ಮುಂದು ಎಂಬ ವಿಷಯದ ಕುರಿತು ಮಾತನಾಡಿದರು.
ಮೂರನೇ ದಿನದ ಮೊದಲ ಅವಧಿಯಲ್ಲಿ ಶ್ರೀ ಶಿವರಾಜ್ ಅವರು ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣದೊಂದಿಗೆ ಉತ್ಕೃಷ್ಟ ಮಾದರಿ ಎಂಬ ವಿಷಯದ ಕುರಿತು ಮಾತನಾಡಿದರು.
ಎರಡನೇ ಅವಧಿಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾದ ಶ್ರೀ ಸು. ರಾಮಣ್ಣ ಅವರು ಭಾರತೀಯ ಸಂಸ್ಕೃತಿ ಎಂಬ ವಿಷಯದ ಕುರಿತು ಮಾತನಾಡಿದರು.
ಶಿಬಿರದ ಸಮಾರೋಪ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ಪರಿಷತ್‍ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು “ಮೂರು ದಿನಗಳ ಕಾಲ ನಡೆದ ಶಿಕ್ಷಕರ ಪ್ರಶಿಕ್ಷಣ ಶಿಬಿರದಲ್ಲಿ ಪಡೆದುಕೊಂಡ ಜ್ಞಾನವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ತರಬೇತಿಯಲ್ಲಿ ಪಾಲ್ಗೊಂಡ ಶಿಕ್ಷಕರನ್ನು ಉದ್ದೇಶಿಸಿ ಮಾತನಾಡಿದರು.